ಬಸವರಾಜ ರಾಜಗುರು

	1920-. ಅಮೋಘ ಸಂಗೀತಗಾರರು. ಕರ್ಣಾಟಕ ಹಾಗೂ ಹಿಂದೂಸ್ಥಾನಿ ಗಾಯನದಲ್ಲಿ ಪ್ರವೀಣರು. ಹುಟ್ಟಿದ್ದು ಧಾರವಾಡ ಜಿಲ್ಲೆಯ ಎಲೆವಾಡ ಗ್ರಾಮದಲ್ಲಿ. ತಂದೆ ಮಹಾಂತಸ್ವಾಮಿ ರಾಜ ಗುರು. ಸಂಗೀತದ ಓಂ ನಾಮ ಹಾಕಿಕೊಟ್ಟ ಗುರು ಕೂಡ. ಇವರು ಬಾಲ್ಯದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಸಂಸ್ಕøತ ಕಲಿಯಲು ಸೇರಿದರು. ಆಗಿನ್ನೂ ಇವರಿಗೆ ಹತ್ತು ವರ್ಷ. ಒಮ್ಮೆ ಆಕಸ್ಮಿಕವಾಗಿ ಶಿವಯೋಗಮಂದಿರದ ಗಾಯನಾಚಾರ್ಯ ಪಂಚಾಕ್ಷರೀ ಗವಾಯಿಗಳು (ಜನ್ಮತಃ ಅಂಧರು) ಮೂರು ಸಾವಿರ ಮಠಕ್ಕೆ ಬಂದಾಗ ಬಾಲಕ ಬಸವರಾಜರ ಬಾಯಿಂದ ಪುಂಖಾನುಪುಂಖವಾಗಿ ಬರುತ್ತಿದ್ದ ಮಧುರವಾದ ಶ್ಲೋಕಗಳನ್ನು ಆಲಿಸಿ ಆತನ ಕಂಚಿನ ಕಂಠಕ್ಕೆ ಮಾರುಹೋಗಿ ಈತನೊಬ್ಬ ಅದ್ವಿತೀಯ ಗಾಯಕನಾಗುತ್ತಾನೆಂದು ಬಗೆದರು. ಕೂಡಲೆ ಮೂರುಸಾವಿರ ಮಠದ ಸ್ವಾಮಿಗಳ ಹತ್ತಿರ ಮಾತನಾಡಿ ಬಾಲಕ ಬಸವರಾಜರನ್ನು ಶಿವಯೋಗಮಂದಿರದಲ್ಲಿಯ ತಮ್ಮ ಆಶ್ರಮಕ್ಕೆ ಕರೆದೊಯ್ದು 1929ರಿಂದ 1939ರ ತನಕ ಮೊದಲು ಕರ್ಣಾಟಕ ಸಂಗೀತ ಅನಂತರ ಹಿಂದೂಸ್ಥಾನಿ ಸಂಗೀತಗಳಲ್ಲಿ ತರಬೇತಿ ಕೊಟ್ಟರು. ಈ ಸಮ್ಮೇಳನದಿಂದಾಗಿ ಈಗಲೂ ಬಸವರಾಜರು ಹಾಡುವಾಗ ಕರ್ಣಾಟಕ ಸಂಗೀತದ ಛಾಯೆ ಅವರ ಹಿಂದೂಸ್ಥಾನಿ ಗಾಯನದಲ್ಲಿ ಕಾಣಬಹುದು.

	ಮುಂದೆ ಇವರು ಹಿಂದೂಸ್ಥಾನಿ ಸಂಗೀತ ವ್ಯಾಸಂಗಕ್ಕಾಗಿ ಸವಾಯಿ ಗಂಧರ್ವರ ಕಡೆಗೆ (ಕೈ. ರಾಮಭಾವು ಕುಂದಗೋಳಕರ) ಹೋಗಿ ಅವರಿಂದ ಸ್ವರಾಲಪಕ್ಕೆ ಪ್ರಸಿದ್ಧವಾದ ಕಿರಾನ ಘರಾನ ಗಾಯನ ಶೈಲಿಯನ್ನು ಅಭ್ಯಸಿಸಿದರು. ಘರಾನಾದ ಹೆಸರಾಂತ ಇನ್ನೊಬ್ಬ ಗಾಯಕ ಸುರೇಶ ಬಾಬು ಮಾನೆ (ಹೀರಾಬಾಯಿ ಬಡೋ ದೇಕರರ ಅಣ್ಣ) ಅವರಿಂದ ಠುಮರಿ, ನಾಟ್ಯಸಂಗೀತ, ಲಘು ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿದರು. ಇವರು ಇನ್ನೂ ಕೆಲವು ಬೇರೆ ಬೇರೆ ಗುರುಗಳಲ್ಲಿ ಶಿಷ್ಯವೃತ್ತಿ ಕೈಗೊಂಡು ಗಾಲ್ಹೇರ ಘರಾಣಾದ ಶೈಲಿಯನ್ನು ಕರಗತ ಮಾಡಿಕೊಂಡರು. ಈ ಎರಡೂ ಫರಾನಾದ ಮಧುರ ಮಿಶ್ರಣದಿಂದ ತಮ್ಮದೇ ಆದ ಶೈಲಿಯೊಂದನ್ನು ನಿರ್ಮಿಸಿಕೊಂಡು ಹಾಡತೊಡಗಿದರು.

	ಇವರು ಮೊದಲಬಾರಿಗೆ ಬಹಿರಂಗವಾಗಿ ಹಾಡಿದ್ದು ವಿಜಯನಗರ ಸಾಮ್ರಾಜ್ಯ ಷಟ್-ಶತ ಸಾಂವತ್ಸರಿಕ (1939) ಉತ್ಸವ ಕಾಲದಲ್ಲಿ. ಬಸವರಾಜರ ಅಮೋಘವಾದ ಕಂಠಶ್ರೀಯಿಂದ ಇಳಿದು ಬಂದ ಅಂದಿನ ಸಂಗೀತ ಅಲ್ಲಿ ನೆರೆದಿದ್ದ ಪಂಡಿತ ಪಾಮರರಿಗೆ ತೃಪ್ತಿನೀಡಿತಲ್ಲದೆ ಮುಂದೆ ಈತನೊಬ್ಬ ಮಹಾನ್ ಸಂಗೀತಗಾರನಾಗುತ್ತಾನೆಂಬ ಭರವಸೆ ನೀಡಿತು.

	ಬಸವರಾಜರ ಗಾಯನದ ವೈಶಿಷ್ಟ್ಯವೆಂದರೆ ಅವರ ನಿಸರ್ಗದತ್ತ ಕಂಠಶ್ರೀ ಮತ್ತು ಪರಿಶ್ರಮಪೂರ್ವಕ ಸಿದ್ಧಪಡಿಸಿದ ಸಂಗೀತದ ವೈವಿಧ್ಯಮಯ ಚಿತ್ರಣ. ಇವರು ಧ್ರುಪದ-ಧಮಾರ, ಖ್ಯಾಲ, ಠುಮರಿ, ಟಪ್ಪಾದ ಜೊತೆಗೆ ಕನ್ನಡ-ಮರಾಠೀ ನಾಟ್ಯಸಂಗೀತ, ದಾಸರಪದಗಳು ಹಾಗೂ ಶರಣರ ವಚನಗಳನ್ನು ಅತ್ಯಂತ ಆಕರ್ಷಕ ಶೈಲಿಯಲ್ಲಿ ಶ್ರೋತೃಗಳಿಗೆ ಉಣಬಡಿಸುವುದು. ಮರಾಠಿಯಲ್ಲಿಯ ಉಗಿಚ ಕಾ ಕಾಂತಾ, ದೇಹಾತಾ ಶರಣಾಗತಾ, ಮಿತಭಾಷಿಣೀ, ಸ್ವಕುಲ ತಾರಕಸುತಾ, ಯದುಮನೀಸದನಾ ಇತ್ಯಾದಿ ನಾಟ್ಯಗೀತಗಳನ್ನು ಹಾಡಿದಾಗ ಇಡೀ ಮಹಾರಾಷ್ಟ್ರವೇ ಇವರನ್ನು ಮುಕ್ತಕಂಠದಿಂದ ಹೊಗಳಿತು. ಕನ್ನಡದಲ್ಲಿ ಇವರು ನೀನೊಲಿದರೆ ಕೊರಡು ಕೊನರುವುದಯ್ಯಾ, ಜಗವ ಸುತ್ತಿರುವುದು ನಿನ್ನ ಮಹಿಮೆ, ಗುರುವಿನ ಗುಲಾಮನಾಗುವ ತನಕ ಇತ್ಯಾದಿ ದಾಸರಪದಗಳು ಹಾಗೂ ಶರಣರ ವಚನಗಳನ್ನು ಹಾಡಿದಾಗ ಕನ್ನಡಿಗರು ಪುಲಕಿತಗೊಂಡಿದ್ದಾರೆ.

	ಇವರ ಆಕರ್ಷಕ ಶೈಲಿ ಎನಿಸಿದ ಠುಮರಿ, ಗಝಲ್, ಟಪ್ಪಾ, ಕೇಲಿ ಲಕ್ನೌದ ವಿದೂಷಿ ಬೇಗಂ ಅಖ್ತರ್ ಇವರನ್ನು `ಸೂರ ಕಾ ಬಾದಶಹ ಎಂದು ಕರೆದರೆ ಭಾರತ ಸರ್ಕಾರದ ಮಾಜಿ ಮಂತ್ರಿ ಬಿ.ವಿ.ಕೇಸ್ಕರರು ಇವರ ಖ್ಯಾಲ್ ಮತ್ತು ಠುಮರಿ ಕೇಳಿ ಇವರನನು `ಹುಕುಮೀ ಎಕ್ಕಾ ಎಂದಿದ್ದಾರೆ. ಇವರು ಭಾರತದ ಎಲ್ಲ ರಾಜ್ಯಗಳಲ್ಲೂ ಸಂಚರಿಸಿ ಸಂಗೀತ ಕಛೇರಿಗಳನ್ನು ನಡೆಸಿದ್ದಾರೆ. ಪಾಕಿಸ್ತಾನದ ಕರಾಚಿ, ಪೇಷಾವರ ಮುಂತಾದ ನಗರಗಳಲ್ಲಿ ಕಛೇರಿಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ.

	1953ರಿಂದ ಇವರು ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸಭೆಯಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತ ಬಂದಿರುವರಲ್ಲದೆ ಇತ್ತೀಚೆಗೆ ದೂರದರ್ಶನದಲ್ಲಿ ಕೂಡ ಭಾಗವಹಿಸುತ್ತಲಿದ್ದಾರೆ.

	ಇವರ ಸಂಗೀತ ಸಾಧನೆಯನ್ನು ಮೆಚ್ಚಿ ಕೇಂದ್ರಸರ್ಕಾರ ಪದ್ಮಶ್ರೀ ಬಿರುದನ್ನು 1975ರಲ್ಲಿ ನೀಡಿದೆ. ದೆಹಲಿಯ ಸಂಗೀತನಾಟಕ ಅಕಾಡೆಮಿ ಇವರಿಗೆ ತಾಮ್ರಪತ್ರ ಸಂಭಾವನೆಗಳನ್ನು ನೀಡಿ ಗೌರವಿಸಿದೆ.

	ಬಸವರಾಜರು ಶ್ರುತಿಗೆ ಒಂದಿಷ್ಟೂ ಹೆಚ್ಚು ಕಡಿಮೆಯಾಗದಂತೆ ಮೂರು ಸಪ್ತಕಗಳಲ್ಲಿ ಲಾಲಿತ್ಯಪೂರ್ಣವಾಗಿ ಸಂಚರಿಸಬಲ್ಲರು. ಅವರ ಚಮತ್ಕಾರ ಶಕ್ತಿ ಅದ್ಭುತವಾದದ್ದು. ಬಸವರಾಜರ ಬಳಿ ಒಂದು ತಂಬೂರಿ, ಕಂಠದಲ್ಲಿ ಒಂದು ಸ್ವರ-ಎರಡು ಸಾಕು-ಬಾಳಿನ ಎಂಥ ವಿಷವನ್ನೂ ಅಮೃತ ಮಾಡಬಲ್ಲದು ಎಂದು ಶಂಕರ್ಸ್ ವೀಕ್ಲಿ ಇವರ ಬಗ್ಗೆ ಬರೆಯುತ್ತ ತಿಳಿಸಿದೆ.
(ಎಸ್.ಬಿ.ಎಚ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ